ಕೌಮಾರ್ಯದ ಶಿಕ್ಷಣ 

	ಬಾಲ್ಯಾವಸ್ಥೆಯ ಅನಂತರ ಆರಂಭವಾಗಿ ವ್ಯಕ್ತಿ ಪ್ರೌಢವಯಸ್ಕನಾಗುವವರೆಗೆ ಅವನ ದೈಹಿಕ, ಮಾನಸಿಕ, ನೈತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ನೆರವಾಗುವಂತೆ ರೂಪಿಸಿರುವ ಶೈಕ್ಷಣಿಕ ಕಾರ್ಯಕ್ರಮ. ಇದು ಮಕ್ಕಳ ಶಿಕ್ಷಣಕ್ಕೂ ವಯಸ್ಕರ ಶಿಕ್ಷಣಕ್ಕೂ ಮಧ್ಯದ ಅಂತಸ್ತಿನದಾಗಿದ್ದು, ಪ್ರೌಢಶಾಲೆ ಮತ್ತು ವಿಶ್ವವಿದ್ಯಾನಿಲಯದ ಶಿಕ್ಷಣಗಳನ್ನು ಒಳಗೊಂಡಿದೆ.

	ಕೌಮಾರ್ಯ 13-14ನೆಯ ವಯಸ್ಸಿನಲ್ಲಿ ಆರಂಭವಾಗಿ 21ನೆಯ ವಯಸ್ಸಿನವರೆಗೆ ಮುಂದುವರಿಯುತ್ತದೆ. ಹರೆಯದ ಲಕ್ಷಣಗಳಿಂದ ಆರಂಭವಾಗುವ ಜೀವನದ ಈ ಅಂತಸ್ತಿನಲ್ಲಿ ಬಾಲಕ-ಬಾಲಕಿಯರಲ್ಲಿ ಗೌಣವಾಗಿ ಲೈಂಗಿಕ ಲಕ್ಷಣಗಳು ಉದ್ಭವಿಸುವುದರ ಜೊತೆಗೆ ಸಂತಾನ ಶಕ್ತಿಯೂ ಮೂಡುತ್ತಿರುತ್ತದೆ. ಬಾಲ್ಯ ಮತ್ತು ವಯಸ್ಕ ಜೀವನದಲ್ಲಿ ಮಾನಸಿಕ, ಸಾಮಾಜಿಕ ಮತ್ತು ನೈತಿಕ ಲಕ್ಷಣಗಳು ಅವರಲ್ಲಾಗ ಕಂಡುಬರುತ್ತದೆ. ಹರೆಯದ ಈ ಅರುಣೋದಯದಲ್ಲಿ ಸಮಾಜ ಅವರಿಗೆ ವಯಸ್ಕರ ಪೂರ್ಣ ಹೊಣೆಗಾರಿಕೆಯನ್ನಾಗಲಿ, ಪಾತ್ರವನ್ನಾಗಲಿ ವಹಿಸಿಕೊಡುವುದಿಲ್ಲ. ಆದರೆ ಮಕ್ಕಳಾದರೋ ಸಮಾಜದ ಆದರ್ಶ ಮೌಲ್ಯಾಧಿಗಳನ್ನು ಅರಿತು ಅವುಗಳಿಗೊಪ್ಪುವಂತೆ ನಡೆದುಕೊಂಡು ಸಮಾಜದ ಮೆಚ್ಚುಗೆ ಪುರಸ್ಕಾರಗಳನ್ನು ಗಳಿಸಿ ತಾವು ಸಮಾಜದ ಪೂರ್ಣ ವ್ಯಕ್ತಿಗಳಾಗಿ ಬಾಳುವ ಉತ್ಕಟಾಕಾಂಕ್ಷೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಕೆಲವರು ಕೌಮಾರ್ಯದಿಂದ ವಯಸ್ಕಜೀವನದ ಕಡೆಗೆ ಸುಗಮವಾಗಿ ಮುಂದುವರಿಯುತ್ತಾರೆ; ಮತ್ತೆ ಕೆಲವರು ಆ ಕಾರ್ಯದಲ್ಲಿ ಭಾವಾತ್ಮಕವಾದ ತೊಡಕುಗಳನ್ನು ಅನುಭವಿಸುತ್ತಾರೆ. ಮೇಲಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅವರ ಶೈಕ್ಷಣಿಕ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಬೇಕಾಗುತ್ತದೆ. ಹಾಗೂ ಪ್ರೌಢಶಾಲೆಯ ಮೊದಲ ತರಗತಿಯಿಂದ ಆರಂಭವಾಗುವ ಅವರ ಶಿಕ್ಷಣದಲ್ಲಿ ಆದರ್ಶಗಳ ಮೇಲ್ಪಂಕ್ತಿ, ವೈಯಕ್ತಿಕ ಗಮನ ಮತ್ತು ಮಾರ್ಗದರ್ಶನ ಮುಖ್ಯ ಅಂಶಗಳಾಗಿರುತ್ತವೆ.

	ಕೌಮಾರ್ಯದ ಆರಂಭಕಾಲ ಬೇರೆಬೇರೆ ಮಕ್ಕಳಲ್ಲಿ ಹವಾಮಾನವನ್ನು ಅನುವಂಶೀಯತೆಗಳನ್ನು ಅವಲಂಬಿಸಿ ವ್ಯತ್ಯಾಸಗೊಳ್ಳುತ್ತದೆ. ಶೀತಪ್ರದೇಶಗಳವರಲ್ಲಿ ಹಾಗೂ ದೈಹಿಕ ದುಡಿಮೆ ಮಾಡುವವರಲ್ಲಿ ಅದು ತಡವಾಗಿ ಆರಂಭವಾದರೆ ಉಷ್ಣ ಪ್ರದೇಶಗಳವರಲ್ಲೂ ಸುಖಜೀವನ ಸಾಗಿಸುವವರಲ್ಲೂ ಮುಂಚಿತವಾಗಿ ಆರಂಭವಾಗುತ್ತದೆ. ಬಾಲಕಿಯರಲ್ಲಿ ಹರೆಯ ಬಾಲಕರಿಗಿಂತ ಒಂದೆರಡು ವರ್ಷ ಮುಂಚಿತವಾಗಿ ಕಂಡುಬರುತ್ತದೆ. ಆಗ ಅವರ ದೈಹಿಕ ಬೆಳವಣಿಗೆ ತೀವ್ರ ಗತಿಯಲ್ಲಿರುತ್ತದೆ. ಆಗ ಅವರಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಅವರ ನಿರೀಕ್ಷೆಗೆ ಮೀರಿದವಾಗಿರುವುದರಿಂದ ಅವರ ಚಲನವಲನಗಳ ಮೇಲಿನ ಹತೋಟಿ ತಪ್ಪುತ್ತದಲ್ಲದೆ, ಅವರು ನಾಚಿಕೆ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಹಾಗೂ ಗೆಳೆಯರೊಂದಿಗೆ ಹೊಂದಿಕೊಂಡು ನಡೆಯಲು ಕೆಲ ಸಮಯದವರೆಗೆ ತೊಂದರೆಯಾಗುತ್ತದೆ. ಈ ಅವಧಿಯಲ್ಲಿ ಉಪಾಧ್ಯಾಯರೂ ಹಾಗೂ ಪಾಲಕರು ಅವರ ಕಡೆಗೆ ಹೆಚ್ಚು ಸಹಾನುಭೂತಿಯಿಂದ ವರ್ತಿಸಬೇಕು.

	ಬಾಲ್ಯದಲ್ಲಿ ಮಕ್ಕಳು ಭೌತಪ್ರಪಂಚಕ್ಕೆ ಹೊಂದಿಕೊಳ್ಳಲು ಕಲಿತರೆ ಕೌಮಾರ್ಯದಲ್ಲಿ ತಮ್ಮ ನೆರೆಹೊರೆಯ ಸಮಾಜಜೀವನಕ್ಕೂ ಆಧ್ಯಾತ್ಮ ಪ್ರಪಂಚಕ್ಕೂ ಹೊಂದಿಕೊಳ್ಳುವುದನ್ನೂ ಕಲಿಯಬೇಕು. ಈ ಅವಧಿಯಲ್ಲಿ ಸರಿಯಾದ ಶಿಕ್ಷಣ ಪಡೆದ ಬಾಲಕರು ಉತ್ತಮ ನಾಗರೀಕರಾಗಬಹುದು. ಇಲ್ಲದಿದ್ದಲ್ಲಿ ಅವರು ಬಾಲಾಪರಾಧಿಗಳಾಗಿ ಸಮಾಜದ ಕ್ಷೇಮಕ್ಕೆ ಕಂಟಕರಾಗಬಹುದು. ಆದ್ದರಿಂದ ಕೌಮಾರ್ಯದ ಶಿಕ್ಷಣವನ್ನು ಕಡೆಗಣಿಸುವುದೆಂದರೆ ಉತ್ತಮ ಜಾತಿಯ ಗಿಡವನ್ನು ಸಾಕಿ-ಸಲಹಿ ಅದು ಹೂ ಹಣ್ಣು ಬಿಡುವಾಗ ನಿರ್ಲಕ್ಷಿಸಿದಂತಾಗುವುದು. ಆದ್ದರಿಂದಲೇ ಮುಂದುವರಿದ ದೇಶಗಳು ಈಚೆಗೆ ಈ ಅವಧಿಯ ಶಿಕ್ಷಣದ ಕಡೆಗೆ ವಿಶೇಷ ಲಕ್ಷ್ಯ ಕೊಡುತ್ತಿವೆ. ತನ್ಮೂಲಕ ಕಿಶೋರಪರಾಧಿಗಳ ಸಂಖ್ಯೆಯನ್ನು ತಡೆಗಟ್ಟುವುದು, ಅವರು ಮುಂದೆ ವಯಸ್ಕಜೀವನದಲ್ಲಿ ಯಶಸ್ವಿ ಪ್ರಜೆಗಳಾಗಿ ಬೆಳೆಯಲು ನೆರವು ನೀಡುವುದು ಸಾಧ್ಯವಾಗುತ್ತಿದೆ. 					(ಎಂ.ಹೆಚ್.ಎನ್)

ಕೌಮಾರ್ಯಕ್ಕೆ ತಕ್ಕ ಶಿಕ್ಷಣ ಕೊಡುವವರು ಈ ಕೆಲವು ಅಂಶಗಳನ್ನು ಗಮನಿಸಿದರೊಳ್ಳೆಯದು.

	1. ತೀವ್ರವಾಗಿ ಬೆಳೆಯಲನುವಾಗಿರುವ ಮಕ್ಕಳ ಶಕ್ತಿ ಸಾಮಥ್ರ್ಯಗಳಿಗೆ ನಿಲುಕುವಷ್ಟು ಯೋಗ್ಯ ಕೆಲಸಗಳನ್ನು ದಂಡಿಯಾಗಿ ಅವರಿಗೆ ನೀಡಬೇಕು.

	2. ಅವರ ಕಾಲ್ಪನಿಕ ವಿಜೃಂಭಣೆಗೆ ಸಾಕಷ್ಟು ಆಹಾರವನ್ನೊದಗಿಸುವ ರಮ್ಯ ಕಥೆ ಕಾದಂಬರಿಗಳನ್ನು ಸಾಹಸ ಕಥೆಗಳನ್ನು ಅವರ ಕೈಗೆ ಕೊಡುವುದರ ಜೊತೆಗೆ ಅಂಥ ಸಾಹಿತ್ಯವನ್ನು ನಿರ್ಮಿಸಲು ಪ್ರೋತ್ಸಾಹ ಕೊಡಬೇಕು.

3. ಲೈಂಗಿಕ ಜೀವನದ ಬಗ್ಗೆ ಸಹಜವಾಗಿ ಅವರಲ್ಲಿ ಕಾಣಿಸಿಕೊಳ್ಳುವ ಕುತೂಹಲಗಳನ್ನು, ಪ್ರಶ್ನೆಗಳನ್ನು ದೂರೀಕರಿಸದೆ ಅವಕ್ಕೆ ಉಚಿತ ಸಮಜಾಯಿಷಿ ಕೊಡಬೇಕು. 

	4. ಬಾಲಕ ಬಾಲಕಿಯರು ನಿಸ್ಸಂಕೋಚವಾಗಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಲು ಉತ್ತರ ಕೌಮಾರ್ಯದಲ್ಲಾದರೂ ಅವಕಾಶವಿದ್ದರೊಳ್ಳೆಯದೆಂದು ಇಂದಿನ ತಜ್ಞರ ಅಭಿಪ್ರಾಯ.

	5. ವಾದದಲ್ಲಿ, ಆಟಪಾಠಗಳಲ್ಲಿ ಸ್ಪರ್ಧಿಸಿ ಗೆಲ್ಲುವ ಹಂಬಲ ಹೆಚ್ಚಿರುತ್ತದಾಗಿ ಶಾಲೆಯ ಒಳಗೆ ಮತ್ತು ಹೊರಗೆ ಮಕ್ಕಳಿಗೆ ಅಂಥ ಸಂದರ್ಭಗಳನ್ನು ವಿಪುಲವಾಗಿ ಕಲ್ಪಿಸಿಕೊಡಬೇಕು. 

	6. ತಾನೇ ಎಲ್ಲವನ್ನೂ ಮಾಡಬಲ್ಲೆ ಎಂಬ ಅಹಂ ಪ್ರತಿಯೊಬ್ಬ ಬಾಲಕನಲ್ಲೂ ಇರುತ್ತದಾಗಿ ಪ್ರಯೋಗಶಾಲೆಯಲ್ಲಿ, ಶಿಬಿರಗಳಲ್ಲಿ, ಪ್ರವಾಸಗಳಲ್ಲಿ ಮಕ್ಕಳಿಗೆ ಮುಖ್ಯ ಕೆಲಸಗಳನ್ನೆಲ್ಲ ನಿರ್ವಹಿಸಲು ಬಿಡಬೇಕು.
	7. ನಾಯಕನಾಗಬೇಕೆಂಬ ಹಿರಿಯಾಸೆ ಕೌಮಾರ್ಯದಲ್ಲಿ ಸಹಜವಾದ್ದರಿಂದ ಅದಕ್ಕೆ ತಕ್ಕ ಶಿಕ್ಷಣ ಹಾಗೂ ವಾತಾವರಣವನ್ನು ಏರ್ಪಡಿಸುವುದು ಅಗತ್ಯ.

	8. ಇರುವ ಹತ್ತಾರು ಪಠ್ಯಗಳಲ್ಲಿ ಯಾವುದನ್ನು ಆರಿಸಬೇಕು ಎಂಬುದರ ಬಗ್ಗೆ ಬಾಲಕರಲ್ಲಿ ಖಚಿತವಾದ ಅಭಿಪ್ರಾಯ ಇನ್ನೂ ಇರುವುದಿಲ್ಲವಾಗಿ ಅವರು ತಮಗೆ ತಕ್ಕ ದಾರಿಯನ್ನು ಸ್ವಪ್ರಯತ್ನದಿಂದ ಅರಿತುಕೊಳ್ಳಲು ಅವಕಾಶ ಕಲ್ಪಿಸುವುದು ಒಳ್ಳೆಯದು. 

	9. ಬಹುಮಾನ ಗಿಟ್ಟಿಸುವ ಗೀಳು ಈ ವಯಸ್ಸಿನವರಲ್ಲಿ ತೀರ ತೀವ್ರವಾಗಿರುವುದರಿಂದ ವರ್ಷಾಂತ್ಯದಲ್ಲಿ ಉತ್ತಮರಿಗೆಲ್ಲ ಬಹುಮಾನ ಕೊಡುವ ಏರ್ಪಾಡು ಇದ್ದರೆ ಒಳ್ಳೆಯದು.

	10. ಬಾಲಕರ ಸ್ವಪ್ರತಿಷ್ಠೆ, ಆತ್ಮ ಪ್ರಯತ್ನಗಳಿಗೆ ಹೆಚ್ಚು ಊನವಾಗದಂತೆ ನೋಡಿಕೊಳ್ಳುವುದು ಪೋಷಕರ ಹಾಗೂ ಬೋಧಕರ ಆದ್ಯ ಕರ್ತವ್ಯ.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ